ಆದಿಚುಂಚನಗಿರಿ
ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿಗೆ ಸಮೀಪದಲ್ಲಿದೆ. ತ್ರೇತಾಯುಗದಲ್ಲಿ ಸೀತಾನ್ವೇಷಿಗಳಾಗಿ ಬಂದ ರಾಮಲಕ್ಷ್ಮಣರಿಗೆ ಗಜಾರಣ್ಯದ ಕಾವೇರೀ ತೀರದ ಚುಂಚನಕಟ್ಟೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಪರಮೇಶ್ವರ ಇಲ್ಲಿ ಬಂದು ನೆಲೆಸಿ ಚುಂಚ ಎಂಬ ರಾಕ್ಷಸನನ್ನು ಕೊಂದನಂತೆ. ಚುಂಚನಿಂದ ಇದು ಚುಂಚನಗಿರಿಯೆನಿಸಿದೆ. ಪರಮೇಶ್ವರನಿಂದ ಸ್ಥಾಪಿತವಾದ ಗುರುಪೀಠಗಳಲ್ಲಿ ಆದಿಪೀಠ ಈ ಕ್ಷೇತ್ರದಲ್ಲಿರುವುದರಿಂದ ಇದು ಆದಿಚುಂಚನಗಿರಿಯಾಗಿದೆ.

ನಿಸರ್ಗಸೌಂದರ್ಯಕ್ಕೆ ಹೆಸರಾಗಿರುವ ಚುಂಚನಗಿರಿಯಲ್ಲಿ ಮೊದಲಿಗೆ ದಟ್ಟವಾಗಿ ಬಿದಿರು ಬೆಳೆದಿತ್ತು. ಬೆಳ್ಳೂರಿನ ಪಾಳೆಯಗಾರನ ಮಗುವಿಗೆ ಗಿಣ್ಣಿಲ್ಲದ ಬಿದಿರಿನ ತೊಟ್ಟಿಲು ಬೇಕಾಯಿತು. ಬಿದಿರನ್ನು ಅರಸಿಕೊಂಡು ಮೂವರು ಮೇದರು ಈ ಗಿರಿಗೆ ಬಂದರು. ನಡುಬೆಟ್ಟಕ್ಕೆ ಬಂದು ಗಿಣ್ಣಿಲ್ಲದ ಬಿದಿರೊಂದನ್ನು ಹುಡುಕಿದರು. ಅದನ್ನು ಕಡಿಯಲು ಮಚ್ಚನ್ನು ಬಿಸಿದಾಗ ಚಿಲ್ಲನೆ ರಕ್ತ ಚಿಮ್ಮಿತು; ಹಿಂದಿರುಗಿ ನೋಡದೆ ಹೊರಟುಹೋಗುವಂತೆ ಅಶರೀರವಾಣಿಯಾಯಿತು. ಭಯಗೊಂಡ ಮೇದರು ತುಸುದೂರ ಹೋಗಿ, ಕೌತುಕವನ್ನು ತಾಳಲಾರದೆ ಹಿಂದಿರುಗಿ ನೋಡಿದರು, ರಕ್ತಕಾರಿ ಅಲ್ಲಿಯೇ ಸತ್ತುಬಿದ್ದರು. ಅವರು ಸತ್ತುಬಿದ್ದ ಮೇದರ ಗುಡ್ಡ ಬೆಳ್ಳೂರಿನ ಸಮೀಪದ ಅಂಬಲಜೀರಹಳ್ಳಿಯ ಪಕ್ಕದಲ್ಲಿದೆ. ಮೇದರ ತಲೆಗಳೆನ್ನಲಾದ ಮೂರು ಕಲ್ಲಿನ ಮುಂಡಗಳು ಚುಂಚನಗಿರಿಯಲ್ಲಿ ಈಗಲೂ ನೋಡಸಿಗುತ್ತವೆ. ಗಿಣ್ಣಿಲ್ಲದ ಬಿದಿರು, ಮೇದರ ಮಚ್ಚಿನಿಂದ ಕಚ್ಚಾದ ಶಿವಲಿಂಗವನ್ನು ಪ್ರವಾಸಿಗಳು ಈಗಲೂ ಕಾಣಬಹುದು.

ಈ ಐತಿಹ್ಯಗಳ ಜೊತೆಗೆ ಉತ್ತಮ ಸ್ಥಳಪುರಾಣವೂ ಈ ಕ್ಷೇತ್ರಕ್ಕಿದೆ. ಈಶ್ವರ ಕಪಾಲದಿಂದ ಅವತರಿಸಿದ ಸಿದ್ಧಯೋಗಿಯೊಬ್ಬ ತೀರ್ಥಯಾತ್ರೆ ಮಾಡುತ್ತ ಪಾರ್ವತಿ ಪರಮೇಶ್ವರರು ತಪಸ್ಸು ಮಾಡುತ್ತಿದ್ದ ಚುಂಚನಗಿರಿಗೆ ಬಂದ. ಅಲ್ಲಿ ಶಿವ ಆ ಯೋಗಿಗೆ ದರ್ಶನವನ್ನು ನೀಡಿ ತನ್ನ ಅಂಶಯುಕ್ತವಾದ ಪೀಠವೊಂದನ್ನು ಸ್ಥಾಪಿಸಿ ತನ್ನ ಪ್ರತಿನಿಧಿಯಾಗಿ ಆ ಸಿದ್ಧಯೋಗಿಯನ್ನು ಅಲ್ಲಿ ಬಿಟ್ಟ. ತಾನು ಪಂಚಪ್ರಾಣಗಳಿಂದ ಆದಿಗಂಗಾಧರೇಶ್ವರ, ಈಶ್ವರ, ಸೋಮೇಶ್ವರ, ಮಲ್ಲೇಶ್ವರ, ಗವಿಸಿದ್ದೇಶ್ವರ - ಹೀಗೆ ಪಂಚಲಿಂಗಾಕೃತಿಯಾಗಿ ಸ್ವಯಂ ಉದ್ಭವಿಸಿದ.

ಕ್ಷೇತ್ರರಕ್ಷಣೆಗಾಗಿ ಆದಿಶಕ್ತಿರೂಪಳಾದ ಸ್ತಂಭದೇವತೆಯನ್ನೂ ಪರಶಿವನೇ ಸ್ಥಾಪಿಸಿದನೆಂದು ಸ್ಥಳಪುರಾಣ ನಿರೂಪಿಸುತ್ತದೆ. ವಿಸ್ತಾರವಾದ ಓಲಗದ ಅರೆಯ ಮೇಲೆ ನಿಂತಿರುವ ಕಂಬದಮ್ಮ, ಭಕ್ತರ ಅಚ್ಚುಮೆಚ್ಚಿನ ದೇವತೆ. ಬಿಂದು ಸರೋವರದ ಪ್ರಸ್ತಾಪವೂ ಸ್ಥಳಪುರಾಣದಲ್ಲಿಯೇ ಬಂದಿದೆ. ನಡುಬೆಟ್ಟದಲ್ಲಿರುವ ಈ ಆಳವಾದ ಸರೋವರ ಶಿವಜಟೆಯಿಂದ ಚಿಮ್ಮಿದ ಬಿಂದುವೊಂದರಿಂದ ಉಂಟಾದುದು. ಇಲ್ಲಿಂದ ಎಷ್ಟೊ ಅಡಿಗಳ ಎತ್ತರದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಾಲಯದ ಗರ್ಭಗುಡಿಯ ಲಿಂಗಬಟ್ಟಲಿನಿಂದ ಅಭಿಷೇಕಜಲ ಯಾವುದೋ ಗುಪ್ತ ಮಾರ್ಗವಾಗಿ ಈ ಸರೋವರಕ್ಕೆ ಇಳಿದುಬರುವುದೆಂಬ ನಂಬಿಕೆಯೂ ಇದೆ.

ಸಮುದ್ರಮಟ್ಟದಿಂದ 3221 ಎತ್ತರದಲ್ಲಿರುವ ಗಿರಿ ಪ್ರಕೃತಿಸೌಂದರ್ಯಕ್ಕೆ ತೌರು. ದಟ್ಟವಾಗಿ ಹಬ್ಬಿನಿಂತಿರುವ ಕಾನನವನ್ನು ಹಾದು ಬೆಟ್ಟವನ್ನು ಏರಿದರೆ ಅನ್ನದಾನಿ ಮಠ ಸಿಕ್ಕುತ್ತದೆ. ಕರ್ನಾಟಕದ ಪ್ರಾಚೀನ ಮಠಗಳಲ್ಲೊಂದಾದ ಅಯ್ಯನಮಠ ಅನ್ನದಾನಕ್ಕೆ ಹೆಸರಾದುದು. ಅರವತ್ತೊಂಬತ್ತಕ್ಕೂ ಹೆಚ್ಚು ಸಂಖ್ಯೆಯ ಗುರುಪರಂಪರೆಯನ್ನು ಪಡೆದ ಈ ಪ್ರಸಿದ್ಧ ಮಠಕ್ಕೆ ನಾಡಿನ ನಾನಾಕಡೆಯ ಭಕ್ತರು ನಡೆದುಕೊಳ್ಳುತ್ತಾರೆ. ಈ ಕ್ಷೇತ್ರವನ್ನು ಕುರಿತ ಜನಪದ ಸಾಹಿತ್ಯವೂ ಅಷ್ಟೆ ವಿಪುಲವಾಗಿದೆ.

ಚುಂಚನಗಿರಿ ಒಂದು ಉತ್ತಮ ಪ್ರವಾಸಿಕ್ಷೇತ್ರ. ಗಿರಿಯ ಒಂದೊಂದು ಮೂಲೆಯಲ್ಲೂ ಅನೇಕ ಅದ್ಭುತಗಳು ನಮಗೆ ಎದುರಾಗುತ್ತವೆ. ಇಲ್ಲಿನ ಗವಿಸಿದ್ಧೇಶ್ವರ ದೇವಾಲಯಕ್ಕೆ ಬಂಡೆಗಳನ್ನೇರಿ ಹೋಗುವುದೊಂದು ಸಾಹಸ. ಇದಕ್ಕಿಂತ ಕಷ್ಟ ಸಾಧ್ಯವಾದ ಗಿರಿಯ ಎರಡು ಶಿಖರಗಳನ್ನು ಚೋಳೂರು ಕಂಬ, ಗಳಿಗೆಗಲ್ಲು ಎಂದು ಕರೆಯಲಾಗಿದೆ. ಚೋಳರು ಕಟ್ಟಿದ ಗಂಗಾಧರನ ಗುಡಿ ಅಲ್ಲಿಂದ ಕಡಿದಾದ ಬಂಡೆಗಳನ್ನೇರಿ ಬೆಟ್ಟದ ದಕ್ಷಿಣ ತುದಿಯನ್ನು ಮುಟ್ಟಿದರೆ ಚೋಳೂರ ಕಂಬ ಸಿಕ್ಕುತ್ತದೆ. ಜಾತ್ರೆಯ ಸಂದರ್ಭದಲ್ಲಿ ಇಲ್ಲಿ ಹಚ್ಚಿದ ದೀಪ ನಲವತ್ತು ಮೈಲು ದೂರದ ಚೋಳೂರಿನ ಕೊಳದಲ್ಲಿ ಕಾಣುವುದಾಗಿ ಹೇಳುತ್ತಾರೆ. ಇನ್ನೊಂದು ಶಿಖರಗಳಿಗೆ ಗಲ್ಲಿಗೆ ಸ್ತ್ರೀಯರೂ ವೃದ್ಧರೂ ಹೋಗುವುದು ಅಸಾಧ್ಯ. ಭೀಕರವಾದ ಕಂದಕಗಳಿಂದ ಸುತ್ತುವರಿದ ಕಡಿದಾದ ಕೋಡುಗಲ್ಲಿಗೆ ಸರಪಣಿಯನ್ನು ಹಿಡಿದು ಹತ್ತುವ ಸಾಹಸ ರೋಮಾಂಚನವನ್ನು ತರುತ್ತದೆ. ಮಕ್ಕಳಾಗದ ಹೆಂಗಸರು ಹರಕೆ ಹೊತ್ತು ಮುಂದೆ ಮಕ್ಕಳಾದರೆ ಬೆನ್ನಿಗೆ ಶಿಶುವನ್ನು ಕಟ್ಟಿಕೊಂಡು ಈ ಶಿಖರವನ್ನು ಹತ್ತಬೇಕು. ಹಾಗೆ ಹತ್ತಿದ ನಿದರ್ಶನಗಳೂ ಇವೆ.

ಗಿರಿಯ ಮಧ್ಯಶಿಖರದಲ್ಲಿ ಕತ್ತಲುಸೋಮೇಶ್ವರ ಲಿಂಗವಿದೆ. ದಟ್ಟವಾದ ಕತ್ತಲು ಕವಿದಿರುವ ಗವಿಯಲ್ಲಿ ಹುಡುಕಿ, ತಡಕಿ ಲಿಂಗದ ದರ್ಶನವನ್ನು ಪಡೆಯಬೇಕು. ಬೆಟ್ಟದ ದಕ್ಷಿಣಕ್ಕಿರುವ ನಾಗರಕಲ್ಲು, ಹೆಡೆಬಿಚ್ಚಿದ ಘೋರ ಸರ್ಪದಂತೆ ಮರದೆತ್ತರಕ್ಕೆ ಬೆಳೆದು ನಿಂತಿದೆ. ಅಲ್ಲಿಗೆ ಸಮೀಪದ ಕೂಡುಬಂಡೆ ಮೂರುಬಾರಿ ಓಗೊಡುತ್ತದೆ. ಮೇದರಗುಡ್ಡದ ಬಳಿಯಲ್ಲಿ ಹಾಕಿದ ಕೂಗು ಸ್ವಚ್ಛವಾಗಿ ಬೆಟ್ಟದ ನೆತ್ತಿಯಿಂದಲೆಲ್ಲೋ ಕೇಳಿಬರುತ್ತದೆ. ಉತ್ತರಭಾಗದ ಹನುಮಾನಕಣಿವೆ ಗಿರಿಯ ಮತ್ತೊಂದು ಪಾಶ್ರ್ವದ ರಮ್ಯನೋಟವನ್ನು ಒದಗಿಸುತ್ತದೆ.

ಚುಂಚನಗಿರಿ ಪವಿತ್ರಕ್ಷೇತ್ರವೆಂತೋ ಅಂತೆಯೇ ಮಠ, ದೇವಾಲಯ, ನಾಗ ಚಾವಡಿ, ಭೈರವನ ಗುಡಿ ಮತ್ತು ನಾನಾ ರೀತಿಯ ನಿಸರ್ಗದ ಅದ್ಭುತಗಳಿಂದ ಕೂಡಿ ಪ್ರೇಕ್ಷಣೀಯ ಸ್ಥಳವೂ ಆಗಿದೆ. 						
(ಜೆ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ